ಮಾಲ್‍ತೋಫ್, ವ್ಯೆಷಿಸ್ಲಾವ್ ಮಿಹಾಯ್‍ಲವಿಚ್ 	
1890-1986 ಸೋವಿಯೆತ್ ಸಮಾಜವಾದಿ ಒಕ್ಕೂಟದ ಪ್ರಧಾನಿ; ರಾಜಕೀಯ ತಜ್ಞ, ಈತನ ಹುಟ್ಟು ಹೆಸರು ಸ್ಕ್ರಿಯಾಬಿನ್. ರಷ್ಯಾದ ಹಿಂದಿನ ವ್ಯತ್ಕ ಪ್ರಾಂತ್ಯದ ಕುಕಾರ್ಕದಲ್ಲಿ 1890ರ ಮಾರ್ಚಿ 9ರಂದು ಜನನ. ಈಗ ಆ ಪ್ರದೇಶವನ್ನು ಕಿರೋಫ್ ಓಬ್ಲಸ್ತ ಪ್ರಾಂತ್ಯದ ಸವ್ಯೆತ್‍ಸ್ಕ್ ಎಂದು ಕರೆಯುತ್ತಾರೆ.

	ಸ್ಕ್ರಿಯಾಬಿನ್ ವಿದ್ಯಾರ್ಥಿಯಾಗಿದ್ದಾಗ ಬೋಲ್ಷೆವಿಕ್ ಪಕ್ಷಕ್ಕೆ ಸೇರಿ ಕeóÁನಿನಲ್ಲಿ 1905ರ ರಷ್ಯನ್ ಮಹಾಕ್ರಾಂತಿಯಲ್ಲಿ ಭಾಗವಹಿಸಿದ. 1906ರಲ್ಲಿ ಮಾಲ್‍ತೋಫ್ (ಸುತ್ತಿಗೆ) ಎಂಬ ಗುಪ್ತನಾಮ ಇಟ್ಟುಕೊಂಡ. 1909ರಲ್ಲಿ ಈತನ ಬಂಧನವಾಯಿತು. 1909ರಿಂದ 1911ರ ತನಕ ವಲೋಗ್ದ ಪ್ರಾಂತ್ಯಕ್ಕೆ ಈತನನ್ನು ಗಡೀಪಾರು ಮಾಡಲಾಯಿತು. ಅನಂತರ ಸೆಯಿಂಟ್ ಪೀಟರ್ಸ್ ಬರ್ಗ್‍ನಲ್ಲಿ (ಇಂದಿನ ಲೆನಿನ್ ಗ್ರಾದ್) ತಾಂತ್ರಿಕ ಶಾಲೆಯಲ್ಲಿ ಶಿಕ್ಷಣಕ್ಕೆ ಸೇರಿಕೊಂಡ. ಇದೇ ಕಾಲದಲ್ಲಿ ಪಕ್ಷದ ಸಂಘಟಕನಾಗಿಯೂ ಕೆಲಸ ಮಾಡಿದ. ಸೆಯಿಂಟ್ ಪೀಟರ್ಸ್‍ಬರ್ಗ್‍ನಲ್ಲಿ 1912ರಲ್ಲಿ ಆರಂಭವಾದ ಪ್ರಾವ್ದಾ ವೃತ್ತಪತ್ರಿಕೆಯ ಸಂಪಾದಕನಾಗಿಯೂ ಸೇವೆಸಲ್ಲಿಸಿದ. 1915ರಲ್ಲಿ ಈತನನ್ನು ಮತ್ತೆ ಬಂಧಿಸಲಾಯಿತಲ್ಲದೆ ಇರಕೂತ್‍ಸ್ಕ್ ಪ್ರಾಂತ್ಯಕ್ಕೆ ಗಡೀಪಾರು ಮಾಡಲಾಯಿತು. ಈತ 1916ರಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಬಂದ. 1917ರಲ್ಲಿ ಬೋಲ್ಷೆವಿಕರು ಅಧಿಕಾರಕ್ಕೆ ಬಂದಮೇಲೆ ಮಾಲ್‍ತೋಫ್ ಹಲವಾರು ಪ್ರಾಂತೀಯ ಪಕ್ಷಸಂಘಟನೆಗಳಲ್ಲಿ ಕೆಲಸಮಾಡಿದ. 1921ರಲ್ಲಿ ಪಕ್ಷದ ಕೇಂದ್ರೀಯ ಆಡಳಿತದಲ್ಲಿ ಪ್ರವೇಶ ದೊರಕಿಸಿಕೊಂಡ. ಕೇಂದ್ರಸಮಿತಿಯ ಸದಸ್ಯ,ಕಾರ್ಯದರ್ಶಿ ಹಾಗೂ ಪಾಲಿತ್‍ಬ್ಯುರೋದ ಸದಸ್ಯನೂ ಆದ. 1924ರಲ್ಲಿ ಪಕ್ಷದ ನಾಯಕನಾಗಿದ್ದ ವ್ಲಜಿಮೀರ್ ಈಲಿಚ್ ಲೆನಿನ್ ತೀರಿಕೊಂಡ ಮೇಲೆ ನಡೆದ ಅಧಿಕಾರದ ಹೋರಾಟದಲ್ಲಿ ಈತ ಜೋಸೆಫ್ ಸ್ಟಾಲಿನ್ನನಿಗೆ ಸಹಾಯ ಮಾಡಿದ. 1925ರ ಡಿಸೆಂಬರ್ ತಿಂಗಳಲ್ಲಿ ಪಾಲಿತ್ ಬ್ಯೂರೊದಲ್ಲಿ ಪೂರ್ಣಕಾಲಿಕ ಸದಸ್ಯತ್ವ ಈತನಿಗೆ ದೊರಕಿತು. ಮಾಸ್ಕೋ ಪಕ್ಷ ಸಮಿತಿಯ ನಿಯಂತ್ರಣವನ್ನು ತಾನೇ ವಹಿಸಿಕೊಂಡ. 1928-30ರ ಅವಧಿಯಲ್ಲಿ ಸ್ಟಾಲಿನ್ ವಿರೋಧಿಗಳ ಸದಸ್ಯತ್ವವನ್ನು ಕಿತ್ತುಹಾಕಿದ. 1930ರಲ್ಲಿ ಜನತಾ ಕಮಿಸಾರರ ಅಧ್ಯಕ್ಷನನ್ನಾಗಿ (ಎಂದರೆ ಸೋವಿಯತ್ ಒಕ್ಕೂಟದ ಪ್ರಧಾನಿಯನ್ನಾಗಿ) ಈತನನ್ನು ನೇಮಿಸಲಾಯಿತು. 1941ರ ತನಕ ಇವನು ಪ್ರಧಾನಿಯಾಗಿದ್ದ.

	ಎರಡನೆಯ ಮಹಾಯುದ್ಧ ಆರಂಭವಾಗುವುದಕ್ಕೆ ಸ್ವಲ್ಪ ಮುಂಚಿತವಾಗಿ ಮಾಲ್‍ತೋಫ್ ವಿದೇಶಾಂಗ ವ್ಯವಹಾರಗಳ (ಮೇ 1939) ಮಂತ್ರಿಪದವಿಯನ್ನೂ ವಹಿಸಿಕೊಂಡ ಜರ್ಮನ್-ಸೋವಿಯೆತ್ ಅನ್ಯಾಕ್ರಮ ಒಪ್ಪಂದಕ್ಕೆ ಸಂಧಾನ ನಡೆಸಿದ (ಮಾಲ್‍ತೋಫ್-ರಿಬ್ಬನ್‍ಟ್ರಾಪ್ ಒಪ್ಪಂದ; ಆಗಸ್ಟ್ 1939). ಈತನನ್ನು 1941, ಮೇನಲ್ಲಿ ಮಂತ್ರಿಮಂಡಲದ ಅಧ್ಯಕ್ಷನನ್ನಾಗಿ ಸ್ಟಾಲಿನ್ ನೇಮಿಸಿದ. 1941 ಜೂನ್‍ನಲ್ಲಿ ಸೋವಿಯತ್ ಒಕ್ಕೂಟದ ಮೇಲೆ ಜರ್ಮನಿ ಆಕ್ರಮಣ ನಡೆಸಿದಾಗ ವಿಶೇಷ ಸಮರ ಮಂತ್ರಿಮಂಡಲವಾದ ರಾಷ್ಟ್ರರಕ್ಷಣಾ ಸಮಿತಿಯಲ್ಲೂ ಸೇವೆಸಲ್ಲಿಸಿದ; ಗ್ರೇಟ್ ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳೊಂದಿಗೆ ಮೈತ್ರಿ ಬೆಳೆಸಿದ. 1943ರಲ್ಲಿ ತೆಹರಾನ್, 1945ರಲ್ಲಿ ಯಾಲ್ಟಾ, ಪಾಟ್ಸ್‍ಡ್ಯಾಮ್ ಹಾಗೂ ಸ್ಯಾನ್‍ಫ್ರಾನ್ಸಿಸ್ಕೋಗಳಲ್ಲಿ ನಡೆದ ಮೈತ್ರಿ ಸಮ್ಮೇಳನದಲ್ಲಿ ಭಾಗವಹಿಸಿದ. ಇವುಗಳ ಫಲಶ್ರುತಿಯಾಗಿ ವಿಶ್ವಸಂಸ್ಥೆಯ ಉಗಮಕ್ಕೆ ನಾಂದಿಯಾಯಿತು.

	1949ರ ಮಾರ್ಚಿಯಲ್ಲಿ ಮಾಲ್‍ತೋಫ್ ವಿದೇಶಾಂಗ ಸಚಿವ ಹುದ್ದೆಯನ್ನು ಬಿಟ್ಟುಕೊಟ್ಟರೂ 1953ರ ಮಾರ್ಚಿಯಲ್ಲಿ ಸ್ಟಾಲಿನ್ ತೀರಿಕೊಂಡಮೇಲೆ ಪುನಃ ವಿದೇಶಾಂಗ ಸಚಿವನಾದ. ಮುಂದೆ ಕೃಷಿ ಹಾಗೂ ವಿದೇಶಾಂಗ ನೀತಿಗಳಿಗೆ ಸಂಬಂಧಿಸಿದಂತೆ ನಿಕಿತಾ ಕ್ರುಶ್ಚೇವನೊಡನೆ ಭಿನ್ನಾಭಿಪ್ರಾಯ ಬಂದದ್ದರಿಂದ 1956 ಜೂನ್‍ನಲ್ಲಿ ಈತನನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಯಿತು. ಮತ್ತೆ ನವೆಂಬರ್‍ನಲ್ಲಿ ರಾಜ್ಯನಿಯಂತ್ರಣ ಸಚಿವನನ್ನಾಗಿ ನೇಮಿಸಲಾಯಿತು. ಮುಂದೆ 1957 ಜೂನ್ ತಿಂಗಳಲ್ಲಿ ಕುಶ್ಚೇವನನ್ನು ಪದಚ್ಯುತಗೊಳಿಸಲು ವ್ಯರ್ಥಪ್ರಯತ್ನ ನಡೆಸಿದ ಗುಂಪಿನ ಸದಸ್ಯರಲ್ಲಿ ಈತನೂ ಒಬ್ಬನಾಗಿದ್ದರಿಂದ ಈತ ತನ್ನ ಪಕ್ಷದ, ರಾಜ್ಯದ ಅಧಿಕಾರಗಳನ್ನು ಕೇಂದ್ರಸಮಿತಿಯ ಸದಸ್ಯತ್ವವನ್ನೂ ಕಳೆದುಕೊಂಡ. ಈತನನ್ನು ಮಗೋಲಿಯಾ ದೇಶದ ರಾಯಭಾರಿಯನ್ನಾಗಿ ನೇಮಿಸಲಾಯಿತು. 1960-61ರ ತನಕ ವಿಯನ್ನಾದಲ್ಲಿ ಅಂತಾರಾಷ್ಟ್ರೀಯ ಅಣುಶಕ್ತಿ ನಿಯೋಗದಲ್ಲಿ ಸೋವಿಯತ್ ಒಕ್ಕೂಟದ ಖಾಯಂ ಪ್ರತಿನಿಧಿಯಾಗಿ ನೇಮಕ ಮಾಡಲಾಯಿತು. 1964ರಲ್ಲಿ ಈತನನ್ನು ಕಮ್ಯುನಿಸ್ಟ್ ಪಕ್ಷದಿಂದ ಉಚ್ಚಾಟಿಸಲಾಯಿತೆಂದು ತಿಳಿದು ಬಂದಿದೆ.

	ಒಟ್ಟಿನಲ್ಲಿ ಮಾಲ್‍ತೋಫ್ ಎರಡನೆಯ ಮಹಾಯುದ್ಧದ ಅವಧಿಯಲ್ಲಿ ಮತ್ತು ಯುದ್ಧಾನಂತರದ ಅವಧಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸೋವಿಯೆತ್ ಒಕ್ಕೂಟದ ಪ್ರಸಿದ್ಧ ರಾಜಕಾರಣಿ ಮತ್ತು ಮುತ್ಸದ್ದಿಯಾಗಿದ್ದ. ಈತ 8-11-1986ರಂದು ತೀರಿಕೊಂಡ.						  
 (ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ